ಚೆನ್ನಮ್ಮ, ಕಿತ್ತೂರು ರಾಣಿ

1778-1829. ಸ್ವಾತಂತ್ರ್ಯ ಸಾಧನೆಗಾಗಿ ಬ್ರಿಟಿಷರೊಂದಿಗೆ ಹೋರಾಡಿದ ವೀರ ಕನ್ನಡ ಮಹಿಳೆ. ಹುಟ್ಟಿದ್ದು ಬೆಳಗಾಂವಿಯ ಹತ್ತಿರದ ಕಾಕತಿ ಗ್ರಾಮದಲ್ಲಿ ದೇಸಾಯಿ ಮನೆತನದಲ್ಲಿ. ಇತಿಹಾಸ, ಪುರಾಣ, ಶಾಸ್ತ್ರ, ಶಸ್ತಾಸ್ತ್ರವಿದ್ಯೆಗಳಲ್ಲಿ ಪಾರಂಗತಳಾಗಿದ್ದಳು. 15ನೆಯ ವಯಸ್ಸಿನಲ್ಲಿ ಕಿತ್ತೂರಿನ ಮಲ್ಲಸರ್ಜನನ್ನು ವಿವಾಹವಾದಳು.

ಮಲ್ಲಸರ್ಜ ತೀರಿಕೊಂಡ ಬಳಿಕ (1816) ಆತನ ಚಿಕ್ಕ ರಾಣಿಯ ಮಗ ಶಿವಲಿಂಗ ರುದ್ರಸರ್ಜ ಎಂಟು ವರ್ಷಗಳ ಕಾಲ ಕಿತ್ತೂರನ್ನಾಳಿದ. ಈತನಿಗೆ ಮಕ್ಕಳಿರಲಿಲ್ಲವಾದ್ದರಿಂದ ಇವನು ಸಾಯುವುದಕ್ಕೆ ಕೆಲವು ದಿನ ಮೊದಲು ಶಿವಲಿಂಗಪ್ಪನೆಂಬ ಬಾಲಕನನ್ನು ದತ್ತು ತೆಗೆದುಕೊಂಡು ಕಿತ್ತೂರು ಸಂಸ್ಥಾನದ ಆಡಳಿತದ ಮೇಲ್ವಿಚಾರಣೆಯನ್ನು ಆಗ ಚೆನ್ನಮ್ಮನೇ ನೋಡಿಕೊಳ್ಳುತ್ತಿದ್ದಳು. ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡಿದ್ದನ್ನು ಧಾರವಾಡದಲ್ಲಿ ಇಂಗ್ಲಿಷ್ ಕಲೆಕ್ಟರ್ ಆಗಿದ್ದ ಥ್ಯಾಕರೆ ಮಾನ್ಯ ಮಾಡಲಿಲ್ಲ. ಕಿತ್ತೂರು ಸಂಸ್ಥಾನವನ್ನು ಹೇಗಾದರೂ ಕಬಳಿಸಬೇಕೆಂಬುದು ಆತನ ಸಂಚಾಗಿತ್ತು. ಆತನಿಗೆ ಬೆಂಬಲವಾಗಿ ನಿಂತವ ದಖನಿನ ಕಮಿಷನರ್ ಚಾಪ್ಲಿನ್. ಇವರಿಬ್ಬರೂ ಮುಂಬಯಿಯ ಗವರ್ನರ್ ಎಲ್ಫನ್ಸ್ಟನನಿಗೆ ಕಿತ್ತೂರಿನ ಪರಿಸ್ಥಿತಿಯನ್ನು ತಿಳಿಸಿದರು. ಕಿತ್ತೂರಿನ ಆಡಳಿತವನ್ನು ಥ್ಯಾಕರೆಗೆ ಒಪ್ಪಿಸಲು ರಾಣಿ ಚೆನ್ನಮ್ಮ ಮತ್ತು ಕಿತ್ತೂರಿನ ಇತರ ಹಿರಿಯರು ಒಪ್ಪಲಿಲ್ಲ. ಥ್ಯಾಕರೆ ಕಿತ್ತೂರಿನ ದಾಳಿ ಇಟ್ಟ (1824). ಚೆನ್ನಮ್ಮನ ನೇತೃತ್ವದಲ್ಲಿ ಕಿತ್ತೂರಿನ ಜನರು ಇಂಗ್ಲಿಷರ ವಿರುದ್ಧ ಹೋರಾಡಿದರು. ಯುದ್ಧದಲ್ಲಿ ಥ್ಯಾಕರೆಯನ್ನೊಳಗೊಂಡಂತೆ ನೂರಾರು ಇಂಗ್ಲಿಷ್ ಸೈನಿಕರು ಸತ್ತರು. ಯುದ್ಧದಲ್ಲಿ ಆದ ಸೋಲು ಇಂಗ್ಲಿಷರನ್ನು ಅಪಯಶಕ್ಕೆ ಈಡುಮಾಡಿತು. ಕಿತ್ತೂರಿನ ಮೇಲೆ ಸೇಡು ತೀರಿಸಿಕೊಳ್ಳಲು ಬ್ರಿಟಿಷರು ನಿರ್ಧರಿಸಿ ಮೈಸೂರು, ಶೋಲಾಪುರ ಮತ್ತು ಇತರ ಸೈನಿಕ ಕೇಂದ್ರಗಳಿಂದ ಭಾರಿ ಸಂಖ್ಯೆಯಲ್ಲಿ ಸೈನ್ಯವನ್ನು ಕಿತ್ತೂರಿಗೆ ತಂದರು. ಈ ಮಧ್ಯೆ ಚೆನ್ನಮ್ಮ ಯುದ್ಧ ತಪ್ಪಿಸಲು ಕಿತ್ತೂರಿನ ಪರಿಸ್ಥಿತಿಯನ್ನು ವಿವರಿಸಿ ಗವರ್ನರ್ ಎಲ್ಫಿನ್ಸ್ಟನನಿಗೂ ಚಾಪ್ಲಿನನಿಗೂ ಪತ್ರ ಬರೆದಳು. ಆದರೆ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ. ಚಾಪ್ಲಿನ್ ಕಿತ್ತೂರು ಕೋಟೆಯನ್ನು ಮುತ್ತಲು ಸೈನ್ಯಕ್ಕೆ ಆಜ್ಞೆ ನೀಡಿದ. ಚೆನ್ನಮ್ಮನ ನೇತೃತ್ವದಲ್ಲಿ ಕನ್ನಡಿಗರು 12 ದಿವಸಗಳ ಕಾಲ ಸತತವಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು. ಚೆನ್ನಮ್ಮನ ಯುದ್ಧ ಕೌಶಲ ಮತ್ತು ದೇಶಾಭಿಮಾನ ಇಂಗ್ಲಿಷರನ್ನು ಚಕಿತಗೊಳಿಸಿದುವು. ಆದರೆ ಕಿತ್ತೂರಿನ ಕೆಲವು ಕೃತಘ್ನರು ಮದ್ದಿನಲ್ಲಿ ಮಣ್ಣು ಸಗಣಿಗಳನ್ನು ಕೂಡಿಸಿದ್ದರಿಂದ ತೋಫುಗಳು ನಿಷ್ಫಲವಾದುವು. 1824ರ ಡಿಸೆಂಬರಿನಲ್ಲಿ ಕಿತ್ತೂರು ಬ್ರಿಟಿಷರ ವಶವಾಯಿತು. ಇಂಗ್ಲಿಷರು ಚೆನ್ನಮ್ಮನನ್ನು ಬಂಧಿಸಿ ಬೈಲಹೊಂಗಲದ ದುರ್ಗದಲ್ಲಿ ಸೆರೆ ಇಟ್ಟರು. ತನ್ನ ಸಂಸ್ಥಾನ ಎಂದಾದರೊಂದು ದಿನ ಸ್ವತಂತ್ರವಾಗುವುದೆಂಬ ಭರವಸೆ ಚೆನ್ನಮ್ಮನಿಗೆ ಇತ್ತು. ಪ್ರಾರ್ಥನೆ, ಪುರಾಣಶ್ರವಣ, ಶಿವಪೂಜೆಗಳಲ್ಲಿ ಆಕೆ ತನ್ನ ಕಾರಾಗೃಹ ಜೀವನವನ್ನು ಕಳೆದಳು. ಅವಳು 1829ರ ಫೆಬ್ರುವರಿ 21ರಂದು ತೀರಿಕೊಂಡಳು. 										

(ಸಿ)

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಚೆನ್ನಮ್ಮನ ಹೆಸರು ಶಾಶ್ವತವಾಗಿದೆ. ಅವಳ ಕಥೆಯನ್ನು ಲಾವಣಿಯಾಗಿ ಇಂದಿಗೂ ಹಾಡುತ್ತಾರೆ. ಅವಳ ಬಗ್ಗೆ ಕನ್ನಡದಲ್ಲಿ ಹಲವಾರು ಕಥೆ, ಕಾದಂಬರಿ, ನಾಟಕಗಳು ಬಂದಿವೆ. ಬಿ.ಆರ್. ಪಂತಲು ಅವರು ಚೆನ್ನಮ್ಮನ ಜೀವನ ಕುರಿತ ಚಲನಚಿತ್ರವೊಂದನ್ನು ತಯಾರಿಸಿದ್ದಾರೆ.
(ನೋಡಿ- ಕರ್ಣಾಟಕದಲ್ಲಿ-ಸ್ವಾತಂತ್ರ್ಯ-ಚಳವಳಿ)	
(ನೋಡಿ- ಕಿತ್ತೂರು)							*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ